ಕರ್ನಾಟಕದ 10 ಸುಂದರ ಬೆಟ್ಟಗಳು - 25ಪ್ರಪಂಚದಲ್ಲಿ ಸುಂದರವಾದ ಪ್ರದೇಶಗಳ ಬಗ್ಗೆ ಹೇಳ್ತಾ ಇದ್ವಿ, ಅಲ್ಲಿ ಪ್ರದೇಶ, ಇಲ್ಲಿ ಪ್ರದೇಶ ಸುಂದರವಾಗಿದೆ ಅಂತ. ಆದ್ರೆ ನಮ್ಮ ಕರ್ನಾಟಕದಲ್ಲೂ ಸುಂದರವಾದ ರಮಣೀಯವಾದ ಬೆಟ್ಟಗಳ ಸಾಲುಗಳಿವೆ. ಇವುಗಳನ್ನ ನೋಡಿದ್ರೆ ಒಂದು ಸಾರಿಯಾದ್ರು ಇಲ್ಲಿದೆ ಹೋಗಿಬರಬೇಕು ಅನ್ನಿಸುತ್ತೆ. ಅಂತಹ ಹತ್ತು ಬೆಟ್ಟಗಳ ವರದಿ ಇಲ್ಲಿದೆ

10. ಕೊಡಚಾದ್ರಿ      


ಕರ್ನಾಟಕದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿದೆ ಸುಂದರ ಪ್ರದೇಶ ಕೊಡಚಾದ್ರಿ. ಸಮುದ್ರ ಮಟ್ಟದಿಂದ 1343 ಮೀಟರ್ ಎತ್ತರವಿರುವ ಬೆಟ್ಟ ಪ್ರಮುಖವಾದ ಹಾಗೂ ಪ್ರಸಿದ್ದವಾದ ಯಾತ್ರ ಸ್ಥಳವಾದ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಹಿನ್ನಲೆಯಲ್ಲಿದೆ. ಪ್ರಕೃತಿ ಪ್ರಿಯರಿಗೆ ಹಾಗೂ ಚಾರಣಿಗರಿಗೆ ಹೇಳಿ ಮಾಡಿಸಿದಂತಹ ಜಾಗ ಇದು. ಮೂಕಾಂಬಿಕ ವನ್ಯ ಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬೆಟ್ಟವು ವಿಶಾಲವಾಗಿ ಹರಡಿಕೊಂಡಿದೆ.
ಕೊಡಚಾದ್ರಿ ಬೆಟ್ಟದ ಮೇಲೆ ಸರ್ವಜ್ಞನ  ಪೀಠವೆಂಬ ಸಣ್ಣ ದೇವಾಲಯವಿದೆ. ಜಾಗದಲ್ಲಿ ಭಗವಾನ್ ಶ್ರೀ ಶಂಕರಾಚಾರ್ಯರು ತಪಸ್ಸು ಮಾಡಿದ್ದರು ಎಂಬ ಪ್ರತೀತಿ ಕೂಡ ಇಲ್ಲಿದೆ. ಸರ್ವಜ್ಞನ ಪೀಠದಿಂದ ಮುಂದಕ್ಕೆ ಕಡಿದಾದ ಬೆಟ್ಟವನ್ನು ಇಳಿದರೆ ಚಿತ್ರ ಮೂಲ ಎಂಬ ಸ್ಥಳವನ್ನ ತಲುಪಬಹುದು. ಇದು ಸೌಪರ್ಣಿಕ ನದಿಯ ಉಗಮ ಸ್ಥಾನ. ಇಲ್ಲಿ ಹಲವಾರು ಜಾತಿಯ ಸಸ್ಯಗಳ ಪ್ರಭೇದಗಳಿದ್ದು ಕೊಡಚಾದ್ರಿಗೆ ಮೆರುಗನ್ನು ತಂದು ಕೊಟ್ಟಿವೆ.

೦9. ಯಾಣ  


ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿರುವ ಯಾಣ. ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಶ್ರೇಣಿಯಲ್ಲಿದೆ. ಇದು ಶಿರಸಿಯಿಂದ 45 ಕಿ.ಮೀ ದೂರದಲ್ಲಿರುವ ಪ್ರದೇಶ. 'ರೊಕ್ಕಿದ್ದರೆ ಗೋಕರ್ಣ ಸೊಕ್ಕಿದ್ದರೆ ಯಾಣ' ಎಂಬ ಮಾತು ಇಲ್ಲಿನ ಜನರಲ್ಲಿ ಚಾಲ್ತಿಯಲ್ಲಿದೆ ವಡ್ಡಿ, ಮತ್ತಿ, ದೇವಿಮನೆ ಘಟ್ಟಗಳು ಸುತ್ತುವರಿಯಲ್ಪಟ್ಟದ್ದರಿಂದ ಯಾವ ದಾರಿಯಲ್ಲಿ ಬಂದರೂ ದುರ್ಗಮ ಬೆಟ್ಟದ ದಾರಿ ಯಾಣ ಪ್ರದೇಶದ್ದು.
ಯಾಣ ಹಳ್ಳಿಯ ಶಿಖರ ಅಂತಾನೆ ಕರೆಯುವ ಹಿಬಂಡೆ 120 ಮೀಟರ್ ಎತ್ತರವಾದ ಸುಮಾರು ಅಷ್ಟೇ ಅಗಲವಾದ ನೆಲಮುಗಿಲನ್ನು ಜೋಡಿಸುವ ಕರಿ ಪರದೆಯಂತೆ ಬೃಹದಾಕಾರವಾಗಿ ಭಯಂಕರವಾದ ಶಿಲಾ ರೂಪವಾಗಿದೆ. ಇದನ್ನು ಮೊದಲ ಸಾರಿ ನೋಡಿದವನಂತು ಒಂದು ಸಲ ನಿಬ್ಬೆರಗಾಗಿ ಮಹಾಕೃತಿಗೆ ತಲೆ ಬಾಗಲೇ ಬೇಕು. ಗುಹೆಯಲ್ಲಿ ತಾನಾಗಿ ಮೂಡಿನಿಂದ ಭೈರವೇಶ್ವಲಿಂಗದ ಮೇಲೆ ಅಂಗುಲ ಗಾತ್ರದ ನೀರು ಮೇಲಿಂದ ಬೀಳುತ್ತದೆ.

೦8. ಕುಂದಾದ್ರಿ ಬೆಟ್ಟ     


ತೀರ್ಥ ಹಳ್ಳಿಯಿಂದ ಆಗುಂಬೆ ಕಡೆಗೆ ಹೋಗುವಾಗ ಗುಡ್ಡೇಕೇರಿ ಎಂಬ ಗ್ರಾಮದಿಂದ ಸುಮಾರು 9 ಕಿ.ಮೀ ದೂರದಲ್ಲಿದೆ ಕುಂದಾದ್ರಿ ಬೆಟ್ಟ. ಇದನ್ನ ಹತ್ತೋದಕ್ಕೆ ಡಾಂಬರು ರಸ್ತೆಯ ಜೊತೆಗೆ ಕಾಲು ದಾರಿಯಿದ್ದು ಎಷ್ಟೋ ಜನ ಇಲ್ಲಿ ನಡೆದುಕೊಂಡೆ ಹೋಗುತ್ತಾರೆ. ಇದು ಜೈನ ಧರ್ಮಿಯರ ಪ್ರವಿತ್ರ ಯಾತ್ರ ಸ್ಥಳ ಎಂದು ಬಿಂಬಿತವಾಗಿದೆ. ಬೆಟ್ಟದ ಮೇಲೆ ಪಾರ್ಶ್ವನಾಥನ ಚೈತ್ಯಾಲಯವನ್ನ ಕಾಣ್ಬೋದು.
ಕುಂದಾದ್ರಿ ಬೆಟ್ಟಕ್ಕೆ ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಬೇಟಿ ನೀಡುತ್ತಾರೆ ಹಾಗೂ ಚಾರಣ ಮಾಡುವುದಕ್ಕೆ ಯೋಗ್ಯವಾದ ಜಾಗವಾದ್ದರಿಂದ ನೂರಾರು ಚಾರಣಿಗರು ಇಲ್ಲಿಗೆ ಬರುತ್ತಾರೆ. ಬೆಟ್ಟದ ಮೇಲಿಂದ ಕಾಣುವ ಪ್ರಕೃತಿಯ ಸೌಂದರ್ಯ ಕಣ್ಣಿಗೆ ಹಬ್ಬವನ್ನ ತರುತ್ತೆ. ಎಲ್ಲಿ ನೋಡಿದರು ದಟ್ಟ ಕಾಡು, ತೋಟಗಳು, ಹೊಲ-ಗದ್ದೆಗಳು ಕಾಣಿಸುತ್ತವೆ. ಬೆಟ್ಟಕ್ಕೆ ಭೇಟಿ ನೀಡುವವರು ಊಟ ಮತ್ತು ನೀರಿನ ವ್ಯವಸ್ಥೆ ಮಾಡಿಕೊಂಡು ಬಂದರೆ ಟ್ರಿಪ್ಪನ್ನ ತುಂಬಾ ಚೆನ್ನಾಗಿ ಎಂಜಾಯ್ ಮಾಡ್ಬೋದು.

೦7. ಗಂಗಮುಲ  


ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟ ಶ್ರೇಣಿಯಲ್ಲಿನ ಬೆಟ್ಟಗಳಲ್ಲಿ ಗಂಗಮುಲ ಕೂಡ ಒಂದು. ಇದನ್ನ 'ವರಹಾ' ಪರ್ವತ ಎಂದೂ ಕೂಡ ಕರೆಯಲಾಗುತ್ತೆ. ಇದು ತುಂಗಾ, ಭದ್ರ ಮತ್ತು ನೇತ್ರಾವತಿ ಸೇರಿದಂತೆ ಮೂರು ಪ್ರಮುಖ ನದಿಗಳ ಮೂಲವಾಗಿ ಹೆಸರುವಾಸಿಯಾಗಿದೆ. ಇದನ್ನ ಯುನೆಸ್ಕೊ ವಿಶ್ವ ಪರಂಪರೆಯ ತಾಣ ಎಂದು ಗುರುತು ಮಾಡಿ ಗೌರವಿಸಲಾಗಿದೆ.
ಚಿಕ್ಕಮಗಳೂರಿನ ಪಶ್ಚಿಮ ಘಟ್ಟಗಳ ಗಂಗಮೌಲಾ, ಆರೋಲಿ, ಗ್ಯಾಂಗ್ರಿಕಲ್ ವ್ಯಾಪ್ತಿಯ ಒಂದು ಭಾಗ ಆಗಿದೆ ಗಂಗಮುಲ. ಇದು ಸಮುದ್ರ ಮಟ್ಟದಿಂದ 1458 ಮೀಟರ್ ಎತ್ತರದಲ್ಲಿದೆ. ಬೆಟ್ಟದ ಸುತ್ತಲೂ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ಮತ್ತು ದಟ್ಟವಾದ ಅರಣ್ಯ ಪ್ರದೇಶವನ್ನು ಹೊಂದಿದೆ. ಇದರ ಸುತ್ತ-ಮುತ್ತಲು ಮ್ಯಾಗ್ನಾಟೈಟ್-ಕ್ವಾರ್ಟ್ಸೈಟ್ ನಿಕ್ಷೇಪಗಳು ಮತ್ತು ಕಬ್ಬಿಣದ ಅದಿರು ನಿಕ್ಷೇಪಗಳನ್ನ ಇಲ್ಲಿ ಕಾಣ್ಬೋದು.

೦6. ಕೆಮ್ಮಣ್ಣುಗುಂಡಿ  


ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವಂತಹ ಒಂದು ಗಿರಿಧಾಮ ಕೆಮ್ಮಣ್ಣುಗುಂಡಿ. ಸಮುದ್ರ ಮಟ್ಟದಿಂದ 1434 ಮೀಟರ್ ಎತ್ತರದಲ್ಲಿರುವ ಪ್ರದೇಶ ಬೆಂಗಳೂರಿನಿಂದ ಸುಮಾರು 250 ಮತ್ತು ಚಿಕ್ಕ ಮಗಳೂರಿನಿಂದ 55 ಕಿ.ಮೀ ದೂರದಲ್ಲಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬೇಸಿಗೆಯ ತಾಣವಾಗಿದ್ದ ಪ್ರದೇಶವನ್ನು. ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ ಎಂದು ಕೂಡ ಕರೆಯುತ್ತಾರೆ.
ಇಲ್ಲಿನ ಸುಂದರ ಉದ್ಯಾನವನಗಳು, ಹಸಿರು ಪ್ರಕೃತಿ,  ನೀರಿನ ಅಬ್ಬಿಗಳು ಮತ್ತು ಪಶ್ಚಿಮ ಘಟ್ಟಗಳ ಮನೋಹರವಾದ ಪರ್ವತಗಳು ಸ್ಥಳವನ್ನ ಆಕರ್ಷಣೀಯವಾಗಿರುವಂತೆ ಮಾಡಿವೆ. ಪರ್ವತಾರೋಹಣ ಮೊದಲಾದ ಚಟುವಟಿಕೆಗಳಿವೆ ಇದು ಸೂಕ್ತವಾದ ಸ್ಥಳವಾಗಿದ್ದು ನೂರಾರು ಜನರು ಇಲ್ಲಿಗೆ ಬರುತ್ತಾರೆ. ಇಲ್ಲಿ ಹೆಚ್ಚಾಗಿ ಕಬ್ಬಿಣದ ಅದಿರು ಸಿಗುತ್ತಿದ್ದು ಇದರಿಂದಲೇ ಹೆಚ್ಚು ಪ್ರಸಿದ್ದಿಯನ್ನ ಪಡೆದುಕೊಂಡು. ಪ್ರವಾಸಕ್ಕೆ ಯೋಗ್ಯವಾದ ಸ್ಥಳವಾಗಿ ನಿರ್ಮಾಣವಾಗಿದೆ.

೦5. ಬಿಳಿಗಿರಿ ಬೆಟ್ಟ  


ಚಾಮರಾಜನಗರದ ಯಳಂದೂರು ತಾಲ್ಲೂಕಿನಲ್ಲಿರುವ ಒಂದು ಬೆಟ್ಟ ಶ್ರೇಣಿ ಬಿಳಿಗಿರಿ ಬೆಟ್ಟ, ಪಶ್ಚಿಮ ಮತ್ತು ಪೂರ್ವ ಬೆಟ್ಟಗಳ ಸಂಗಮದಲ್ಲಿದ್ದು. ಪ್ರವಾಸಿಗರಿಗೆ ಸುಂದರ ಅನುಭವವನ್ನು ನೀಡುತ್ತೆ. ಇದನ್ನ ಹೆಚ್ಚಾಗಿ ಬಿ. ಆರ್. ಹಿಲ್ಸ್ ಎಂದು ಕೂಡ ಕರೆಯುತ್ತಾರೆ. ಪ್ರದೇಶದಲ್ಲಿ ಬಿಳಿಗಿರಿರಂಗನಾಥಸ್ವಾಮಿಯ ದೇವಾಲಯವಿದ್ದು ಹೆಚ್ಚು ಪ್ರಸಿದ್ದಿಯನ್ನ ಪಡೆದುಕೊಂಡಿದೆ. ಇದನ್ನ ವನ್ಯಜೀವಿ ಅಭಯಾರಣ್ಯ ಎಂದು ಕೂಡ ಕರೆಯಲಾಗುತ್ತೆ.
1972ರ ವನ್ಯ ಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಸಂರಕ್ಷಿತ ಮೀಸಲು ಪ್ರದೇಶವನ್ನಾಗಿ ಮಾಡಲಾಗಿದೆ. ಪಶ್ಚಿಮ ಘಟ್ಟಗಳ ಮತ್ತು ಪೂರ್ವ ಘಟ್ಟಗಳ ಸಂಗಮವಾಗಿದೆ ಬಿಳಿಗಿರಿ ಬೆಟ್ಟ.  ಅಭಯಾರಣ್ಯ ಪರಿಸರ ವ್ಯವಸ್ಥೆಗೆ ನೆಲೆಯಾಗಿ ಮಾರ್ಪಟ್ಟಿದೆ. ಭಾರತದ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರದ ಅನುಮೋದನೆಯಿಂದ ಹುಲಿ ಮೀಸಲು ಪ್ರದೇಶವಾಗಿ ನಿರ್ಮಾಣವಾಗಿದೆ. ದೇವಾಲಯಕ್ಕೆ ಬರುವ ಭಕ್ತರ ಜೊತೆಗೆ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ.

೦4. ಆಗುಂಬೆ   


ಕರ್ನಾಟಕದಲ್ಲಿ ಹೆಚ್ಚಿನ ಸುಂದರ ಬೆಟ್ಟಗಳು ಇರೋದು ಚಿಕ್ಕಮಗಳೂರು, ಇದನ್ನ ಬಿಟ್ಟರೆ ಶಿವಮೊಗ್ಗ ಜಿಲ್ಲೆಯಲ್ಲಿ. ತೀರ್ಥಹಳ್ಳಿ ತಾಲೂಕಿನ ಪಶ್ಚಿಮ ಘಟ್ಟಗಳಲ್ಲಿರುವ ಒಂದು ಊರು ಆಗುಂಬೆ. ಇಲ್ಲಿನ ಪ್ರಕೃತಿ ಸೌಂದರ್ಯ ಅದ್ವಿತೀಯ. ಸಾಯಂಕಾಲದ ಸೂರ್ಯಾಸ್ತದ ದೃಶ್ಯವನ್ನ ನೋಡಲು ಸಾವಿರಾರು ಜನ ಇಲ್ಲಿಗೆ ಬರುತ್ತಾರೆ. ಅದೇ ಸಮಯಕ್ಕೆ ಬರುವ ತುಂತುರು ಮಳೆ ನೋಡುಗರನ್ನು ಪುಳಕಿತವಾಗುವಂತೆ ಮಾಡುತ್ತೆ.
ಶಿವಮೊಗ್ಗದಿಂದ ಸುಮಾರು 5೦ ಕಿ.ಮೀ, ದಕ್ಷಿಣ ಕನ್ನಡ ಜಿಲ್ಲೆಯಿಂದ 3೦ ಕಿ.ಮೀ ದೂರದಲ್ಲಿರುವ ಸಹ್ಯಾದ್ರಿ ಶ್ರೇಣಿಗಳಲ್ಲಿ ಒಂದು ಆಗುಂಬೆ. ಭಾರತದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಆಗುಂಬೆ ಕೂಡ ಹೆಸರಾಗಿದೆ. ಆದ್ದರಿಂದಲೇ ಆಗುಂಬೆಯನ್ನ ಕರ್ನಾಟಕದ ಚಿರಾಪುಂಜಿ ಎಂದು ಕರೆಯುತ್ತಾರೆ. ಭಾರತದ ಶಾಶ್ವತ ಹರಿದ್ವರ್ಣವನ ಸಂಶೋಧನ ಕೇಂದ್ರ ಇಲ್ಲಿದೆ. ಆಗುಂಬೆಯ ಸೌಂದರ್ಯವನ್ನ ಬರಿ ಮಾತನಾಡಿದರೆ ಸಾಕಾಗೊದಿಲ್ಲ ಕಣ್ಣಾರೆ ಸವೆಯಬೇಕು.

೦3. ಮುಳ್ಳಯ್ಯನಗಿರಿ   


ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಬಾಬಾ ಬುಡನ್ಗಿರಿ ಬೆಟ್ಟಗಳ ಸಾಲಿನಲ್ಲಿರುವ ಒಂದು ಶಿಖರ ಮುಳ್ಳಯ್ಯನ ಗಿರಿ. ಸಮುದ್ರ ಮಟ್ಟದಿಂದ 1930 ಮೀಟರ್ ಎತ್ತರದಲ್ಲಿರುವ ಮುಳ್ಳಯ್ಯನ ಗಿರಿ ಕರ್ನಾಟಕದ ಅತ್ಯುನ್ನತ ಗಿರಿ ಶಿಖರವಾಗಿದೆ. ಅಲ್ಲದೆ ಇದು ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಿನ ಅತೀ ಎತ್ತರದ ಗಿರಿ ಶ್ರೇಣಿ. ಇದರ ಬೆಟ್ಟದ ಮೇಲೆ ಮುಳ್ಳಯ್ಯ ಸ್ವಾಮಿಯ ದೇವಾಲಯವಿದ್ದು ಹೆಚ್ಚು ಪ್ರಸಿದ್ದಿಯನ್ನ ಪಡೆದುಕೊಂಡಿದೆ.
ಚಾರಣಿಗರ ನೆಚ್ಚಿನ ತಾಣವಾಗಿರುವ ಮುಳ್ಳಯ್ಯನಗಿರಿಗೆ ಭಕ್ತರ ಜೊತೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತೆ. ಕರ್ನಾಟಕದ ಬೆಟ್ಟಗಳ ಸಾಲಿನ ರಾಜ ಎನಿಸಿಕೊಂಡಿರುವ ಮುಳ್ಳಯ್ಯನ ಗಿರಿ ಹಲವರು ವಿಶೇಷತೆಗಳನ್ನ ಒಳಗೊಂಡಿದೆ. ಧಾರ್ಮಿಕ ಹಾಗೂ ಪ್ರಾಕೃತಿಕ ನೆಲೆವೀಡು, ಅಂಕು-ಡೊಂಕಿನ ಕಡಿದಾದ ಹಾದಿ. ಒಂದೆಡೆ ಕಾಫಿಯ ಕಣಿವೆ ಇನ್ನೊಂದೆಡೆ ಮರ-ಗಿಡಗಳು. ಅಪರೂಪದ ಶೋಲಾ ಕಾಡು. ಮೈತುಂಬಾ ಹುಲ್ಲು ಹಾಸಿನಿಂತ ಹೊದ್ದಿರುವ ಪರ್ವತ ಸಾಲುಗಳು ಅದ್ಬುತವಾಗಿ ಕಂಡುಬರುತ್ವೆ.

೦2. ಕೊಡಗು   


ಕೊಡಗನ್ನು ಭಾರತದ ಸ್ಕಾಟ್ಲ್ಯಾಂಡ್, ಕರ್ನಾಟಕದ ಕಾಶ್ಮೀರ ಎಂದು ಕರೆಯಲಾಗುತ್ತೆ. ಪ್ರದೇಶವು ನಿತ್ಯಹರಿದ್ವರ್ಣ ಅರಣ್ಯ, ಸುಂದರ ಹಸಿರು ಕಣಿವೆಗಳು, ಮಂಜಿನ ಗುಡ್ಡಗಳು, ವಕ್ರವಕ್ರವಾಗಿರುವ ಕಾಫಿ ತೋಟಗಳು, ಟೀ ಎಸ್ಟೇಟ್, ಕಿತ್ತಳೆ ತೋಟ ಮತ್ತು ವೇಗವಾಗಿ ಹರಿಯುವ ನದಿಗಳು ಇಲ್ಲಿ ಜನಪ್ರಿಯವಾಗಿವೆ. ದಕ್ಷಿಣ ಭಾರತದಲ್ಲೇ ಜನಪ್ರಿಯ ವಾರದ ರಜಾ ದಿನ ಕಳೆಯುವ ವಿಶೇಷವಾದ ತಾಣ ಕೊಡಗು ಎನಿಸಿದೆ.
ಐತಿಹಾಸಿಕ ಸ್ಮಾರಕಗಳು, ಅರಮನೆಗಳು, ಕೋಟೆ ಕೊತ್ತಲ ಮತ್ತು ಪುರಾತನ ಸ್ಮಾರಕಗಳು ಸೇರಿದಂತೆ ಅನೇಕ ಆಕರ್ಷಣೀಯ ಸ್ಥಳಗಳು ಇಲ್ಲಿವೆ. ಅಬ್ಬಿ ಜಲಪಾತ, ಇರ್ಪು ಜಲಪಾತ, ಮಳ್ಳಳ್ಳಿ ಜಲಪಾತ, ಮಡಿಕೇರಿ ಕೋಟೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬೇಟಿ ನೀಡುವಂತಹ ಸ್ಥಳವಾಗಿವೆ. ಪಶ್ಚಿಮದಲ್ಲಿ ದಕ್ಷಿಣ ಕನ್ನಡ, ಉತ್ತರಕ್ಕೆ ಹಾಸನ, ಪೂರ್ವಕ್ಕೆ ಮೈಸೂರು, ದಕ್ಷಿಣಕ್ಕೆ ಕೇರಳದ ಕೊಣ್ಣುರು  ಪ್ರದೇಶಗಳನ್ನು ತನ್ನ ಗಡಿ ಮಾಡಿಕೊಂಡಿರುವ ಕೊಡಗು ತನ್ನ ಆಚರಣೆ ಸಂಪ್ರದಾಯ ಮತ್ತು ಪ್ರವಾಸಿ ಸ್ಥಳಗಳಿಂದ ವಿಭಿನ್ನವಾಗಿದೆ.

೦1. ನಂದಿ ಬೆಟ್ಟ  


ಚಿಕ್ಕಬಳ್ಳಾಪುರದಿಂದ 1೦ ಕಿ.ಮೀ ಹಾಗೂ ರಾಜಧಾನಿ ಬೆಂಗಳೂರಿನಿಂದ 45 ಕಿ.ಮೀ ದೂರವಿರುವ ನಂದಿ ಬೆಟ್ಟ ಅಥವಾ ನಂದಿ ದುರ್ಗ ಪುರಾತನ ಕಾಲದ ಕೋಟೆ, ಪ್ರಸ್ಥುತ ಸುಂದರ ಪ್ರವಾಸಿ ತಾಣ. ಸಮುದ್ರ ಮಟ್ಟದಿಂದ 1478 ಮೀ ಎತ್ತರದಲ್ಲಿದೆ. ಇದು ಭಾರತದ ಎರಡನೆ ಅತ್ಯಂತ ದೊಡ್ಡ ಬೆಟ್ಟ ಎಂಬ ಖ್ಯಾತಿಯನ್ನ ಪಡೆದುಕೊಂಡಿದೆ. ಪ್ರತಿಯೊಬ್ಬ ಕನ್ನಡಿಗನು ನೋಡಲೇ ಬೇಕಾದ, ಐತಿಹಾಸಿಕ ಪುರಾವೆಗಳನ್ನ ಹೊಂದಿರುವಂತಹ ರಮಣೀಯವಾದ ಜಾಗ. ಇಲ್ಲಿನ ಸೂರ್ಯೋದಯವನ್ನ ನೋಡುವುದಕ್ಕೆ ನೂರಾರು ಜನರು ಮುಂಜಾನೆಯೇ ಇಲ್ಲಿಗೆ ಬಂದು ಸೇರಿರುತ್ತಾರೆ.
ನಂದಿ ಬೆಟ್ಟವು ಬೇಸಿಗೆಯ ಪ್ರವಾಸಿ ತಾಣವಾಗಿ ಜನಪ್ರಿಯವಾಗಿದೆ. ರಾಜ್ಯದ ತೋಟಗಾರಿಕೆ ಇಲಾಖೆ ಕೈತೋಟವನ್ನ ನಿರ್ಮಿಸಿದೆ. ಟಿಪ್ಪು ಡ್ರಾಪ್, ಕುದುರೆ ಸವಾರಿ, ನರಸಿಂಹ ದೇವಾಲಯ, ಮಕ್ಕಳ ಆಟದ ಮೈದಾನ, ಹೋಟೆಲ್ಗಳು ಮೊದಲಾದವು ಇಲ್ಲಿನ ಆಕರ್ಷಣೀಯ ಸ್ಥಳವಾಗಿವೆ. ಯಾವಗಲು ಪ್ರವಾಸಿಗರಿಂದ ತುಂಬಿ ತುಳುಕುತ್ತದೆ ನಂದಿ ಬೆಟ್ಟ. 'ನಂದಿ ನೋಡದವನು ಹಂದಿಗೆ ಸಮ' ಎನ್ನುವ ಮಾತು ಜಾನಪದರಲ್ಲಿ ತಳಕು ಹಾಕಿಕೊಂಡಿದೆ. ಒಂದು ದಿನದ ಪ್ರವಾಸಕ್ಕೆ ಉತ್ತಮವಾದ ಜಾಗ ನಂದಿ ಬೆಟ್ಟ.
ಮಂಜುನಾಥ್ ಜೈ

ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ಜೊತೆಗೆ ಟಾಪ್ 10 ಮಾಹಿತಿಯನ್ನು ಮೊದಲು ಓದಲು ಸಬ್ ಸ್ರ್ಕೈಬ್ ಆಗಿ. ನಿಮಗೆ ಈ ಮಾಹಿತಿ ಇಷ್ಟ ಆದ್ರೆ ಶೇರ್ ಮಾಡಿ. 
ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ 10 ಪ್ರಸಿದ್ಧ ರಾಜರು - 22

ಪ್ರಪಂಚದ 10 ಎತ್ತರದ ಪರ್ವತಗಳು - 26