ಭಾರತದ 10 ಪ್ರಸಿದ್ಧ ರಾಜರು - 22


ಭರತ ಉಪಖಂಡವನ್ನು ಅನೇಕ ರಾಜ ಮನೆತನಗಳು ಆಳಿ ಅಳಿದು ಹೋಗಿವೆ. ರಾಜ ಮನೆತನದಲ್ಲಿ ಹುಟ್ಟಿ ಶ್ರೇಷ್ಠರೆನಿಸಿಕೊಂಡ ರಾಜರು ಇಂದಿಗೂ ತಮ್ಮ ನೆರಳನ್ನು ತಮ್ಮ ಪ್ರದೇಶದ ಮೇಲೆ ಬೀರಿದ್ದಾರೆ. ರಾಜರು ಬರಿ ಯುದ್ದಗಳಿಂದ ಮಾತ್ರ ಪ್ರಸಿದ್ದಿಯನ್ನ ಪಡೆದಿಲ್ಲ. ಅವರು ಮಾಡಿದಂತಹ ಉತ್ತಮ ಕೆಲಸಗಳು ಇವರನ್ನು ನೆನಪು ಮಾಡಿಕೊಳ್ಳುವಂತೆ ಮಾಡಿದೆ. ಇಂತಹ ಹತ್ತು ರಾಜರುಗಳ ಕಥೆ ಇಲ್ಲಿದೆ ನೋಡಿ  

10. ಮಹಾರಾಣ ಪ್ರತಾಪ್       


ಮಹಾರಾಣಾ ಪ್ರತಾಪ್ ಅಥವಾ ಮೇವಾರದ ಪ್ರತಾಪ್ ಸಿಂಗ್ ವಾಯುವ್ಯ ಭಾರತದ ರಾಜ್ಯವಾದ ಮೇವಾಡವನ್ನು ಆಳುತ್ತಿದ್ದ ಹಿಂದೂ ದೊರೆ. ಇವನು ಸೂರ್ಯವಂಶಿ ರಜಪೂತರ ಸಿಸೋದಿಯಾ ವಂಶಕ್ಕೆ ಸೇರಿದವನು. ತೀಕ್ಷ್ಣ ಸ್ವಭಾವದ ರಜಪೂತರ ಹೆಮ್ಮೆ ಮತ್ತು ಆತ್ಮಗೌರವದ ಸಾಕಾರರೂಪವಾಗಿದ್ದ ಪ್ರತಾಪ್ ಶತಮಾನಗಳವರೆಗೆ ರಜಪೂತರ ಮಹತ್ವಾಕಾಂಕ್ಷೆಯ ಗುಣಗಳಿಗೆ ದೃಷ್ಟಾಂತವಾಗಿದ್ದನು.
ಪ್ರತಾಪ್ ಕುಂಭಲ್ಘಡ್ಯಲ್ಲಿ ಎರಡನೇ ಮಹಾರಾಣಾ ಉದಯಯ್ ಸಿಂಗ್ ಮತ್ತು ಮಹಾರಾಣಿ ಜಾಂವಂತ ಬಾಯಿ ಸೊಂಗಾರರ ಮಗನಾಗಿ ಹುಟ್ಟಿದನು. ರಾಣ ಪ್ರತಾಪ್ ಸಿಂಗ್ ತನ್ನ ಚಾಣಾಕ್ಷತನ ಮತ್ತು ಯುದ್ದ ನೀತಿಗಳಿಂದ ಹೆಚ್ಚು ಪ್ರಸಿದ್ದಿಯನ್ನು ಪಡೆದ ರಾಜ. ಈತನು 90 ಕಿಲೋ ಗ್ರಾಮ್ ತೂಕದ ಖಡ್ಗವನ್ನು ಬಳಸುತ್ತಿದ್ದ. ಮತ್ತು ಯುದ್ದದಲ್ಲಿ ಎದುರಾಳಿಯ ಕೈಯಲ್ಲಿ ಶಸ್ತ್ರವಿಲ್ಲದಿದ್ದಲ್ಲಿ ಅವರಿಗೆ ತನ್ನದೊಂದು ಖಡ್ಗವನ್ನು ನೀಡಿ ಯುದ್ದವನ್ನು ಮಾಡುತ್ತಿದ್ದ. ಇವನು ತನ್ನ ಶಕ್ತಿ ಸಾಮರ್ಥ್ಯದಿಂದ ಹೆಚ್ಚು ಹೆಸರುವಾಸಿದ ದೊರೆ.

09. 1ನೇ ಚಂದ್ರಗುಪ್ತ         


ಗುಪ್ತ ಸಾಮ್ರಾಜ್ಯಗಲ್ಲಿ 1ನೇ ಚಂದ್ರಗುಪ್ತ ರಾಜನದು ವಿಶಿಷ್ಠವಾದ ಸ್ಥಾನ. ಗುಪ್ತ ಸಾಮ್ರಾಜ್ಯವನ್ನ ವಿಸ್ತಾರ ಮಾಡಿ ಹೆಸರುಗಳಿಸಿದ್ದ ಗುಪ್ತ ವಂಶದ ಅರಸು 1ನೇ ಚಂದ್ರಗುಪ್ತ, ಗಂಗಾ ನದಿ ತೀರದ ಅನೇಕ ರಾಜ ಮನೆತನಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಹೆಸರುವಾಸಿಯಾಗಿದ್ದಾನೆ.
ಗುಪ್ತ ವಂಶದ ಸ್ಥಾಪಕನಾದ ಶ್ರೀ ಗುಪ್ತನ ಮೊಮ್ಮಗನಾಗಿ ಗಟೋಟ್ಕಾಚಾನ ಮಗನಾಗಿ ಜನಿಸಿದ 1ನೇ ಚಂದ್ರಗುಪ್ತ  ಕ್ರಿಸ್ತ ಶಕ 320ರಲ್ಲಿ ಅಧಿಕಾರಕ್ಕೆ ಬಂದನು. ಇವನನ್ನು ಸಿಂಹಾಸನಕ್ಕೆ ತಂದು ತಂದೆ ಗಟೋಟ್ಕಾಚಾ ಮರಣಹೊಂದಿದನು. ನಂತರ ತನ್ನ ಸುತ್ತ ಮುತ್ತಲ ಸಾಮ್ರಾಜ್ಯವನ್ನೆಲ್ಲ ವಶಪಡಿಸಿಕೊಂಡು ರಾಜ್ಯ ವಿಸ್ತರಣೆ ಮಾಡಿದನು. ಲಿಖಾವತಿ  ರಾಜಕುಮಾರಿ ಕುಮಾರದೇವಿಯನ್ನು ಮದುವೆಯಾದನು. ಇವರಿಬ್ಬರ ನಡುವಿನ ವೈವಾಹಿಕ ಸಂಬಂಧಗಳು ಗುಪ್ತರ ಸಾಮ್ರಾಜ್ಯದ ರಾಜಕೀಯ ಶ್ರೇಷ್ಠತೆಗೆ ಕಾರಣವಾಗಿದ್ದವು.

08. ಸಮುದ್ರಗುಪ್ತ   


ಗುಪ್ತ ಸಾಮ್ರಾಜ್ಯದ ಪ್ರಮುಖ ದೊರೆ ಸಮುದ್ರಗುಪ್ತ. ಇವನ ಕಾಲವನ್ನ ಭಾರತದ ಸುವರ್ಣ ಯುಗ ಎಂದು ಪರಿಗಣಿಸಲಾಗಿದೆ. ಈತನ ದಿಗ್ವಿಜಯವನ್ನು ಹರಿಸೇನನ ಅಲಹಬಾದ್ ಸ್ಥಂಭ ಶಾಸನ ವಿವರವಾಗಿ ತಿಳಿಸುತ್ತೆ. ಭಾರತೀಯ ಇತಿಹಾಸದಲ್ಲಿ ಮಹಾನ್ ಸೇನಾ ಪ್ರತಿಭೆಗಳ ಒಂದು ಗಣಿ ಎಂದು ಈತನನ್ನ ಕರೆಯಲಾಗುತ್ತೆ. ಗುಪ್ತ ವಂಶದ ಮೂರನೇ ಮಹಾನ್ ದೊರೆ ಸಮುದ್ರ ಗುಪ್ತ.
ಸುಮುದ್ರಗುಪ್ತ ಒಬ್ಬ ಉಪಕಾರ ಬುದ್ದಿಯ ಆಡಳಿತಗಾರನಾಗಿ, ಮಹಾನ್ ಯೋಧನಾಗಿ ಮತ್ತು ಕಲೆಗಳ ಪೋಷಕನಾಗಿದ್ದನು. ಇವನ ಸಹೋದರರು ಮತ್ತು ತಂದೆಯ ಆಯ್ಕೆಯ ಮೇರೆಗೆ ಗುಪ್ತ ಸಾಮ್ರಾಜ್ಯದ ಉತ್ತರಾದಿಕಾರಿಯಾಗಿ ಅಧಿಕಾರವನ್ನು ವಹಿಸಿಕೊಂಡನು. ಈತನಿಗೆ ರಾಜಾ ಚಕ್ರವರ್ತಿ ಅಥವಾ ಮಹಾನ್ ಚಕ್ರವರ್ತಿ, ನಿರ್ವಿವಾದ ರಾಜ ಎಂಬ ಬಿರುದನ್ನು ಗಳಿಸಿದ್ದನು. ಬರಿ ಸಾಮ್ರಾಜ್ಯ ವಿಸ್ತರಣೆಯಲ್ಲಿ ಮಾತ್ರ ಗಮನ ಕೊಡದೆ ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾನೆ.

07. ರಂಜಿತ್ ಸಿಂಗ್    


19ನೇ ಶತಮಾನದ ಉತ್ತರಾರ್ಧದಲ್ಲಿ ವಾಯುವ್ಯ ಭಾರತೀಯ ಉಪಖಂಡನ್ನು ಆಳಿದ ಸಿಖ್ ದೊರೆ ಮಹಾರಾಜ ರಂಜಿತ್ ಸಿಂಗ್. ಬಾಲ್ಯದಲ್ಲಿಯೇ ಸಿಡುಬುರೋಗದಿಂದ ತನ್ನ ಎಡ ಕಣ್ಣನ್ನು ಕಳೆದುಕೊಂಡ ಇವರು ತಮ್ಮ ಅಸಮಾನ್ಯ ಶಕ್ತಿ ಸಾಮರ್ಥ್ಯದಿಂದ ಅದೆಲ್ಲವನ್ನು ಮೆಟ್ಟಿ ನಿಂತರು. 10ನೇ ವಯಸ್ಸಿನಲ್ಲಿ ತಮ್ಮ ತಂದೆಯೊಂದಿಗೆ ಮೊದಲ ಯುದ್ದದಲ್ಲಿ ಹೋರಾಡಿದ ವೀರ. ತನ್ನ ತಂದೆ ಮಡಿದ ನಂತರ ಹದಿಹರೆಯದ ವಯಸ್ಸಿನಲ್ಲೇ ಆಫ್ಘಾನಿಸ್ಥಾನವನ್ನು ಗೆದ್ದು ದೊರೆಯಾದ.
ಹರಿದು ಹಂಚಿ ಹೋಗಿದ್ದ ಸಿಖ್ ಸಾಮ್ರಾಜ್ಯಗಳನ್ನು ಒಟ್ಟುಗೂಡಿಸಿ ಅಖಂಡ ಸಾಮ್ರಾಜ್ಯ ನಿರ್ಮಾಣ ಮಾಡಿದರು. ಮುಸ್ಲಿಂ ಸೇನೆಗಳ ಆಕ್ರಮಣನ್ನ ತಡೆದದ್ದು, ಬ್ರೀಟಿಷರೊಂದಿಗೆ ಸೌಹಾರ್ದ ಸಂಬಂದ ಬೆಳೆಸಿದ್ದು ಇವರು ಮಾಡಿದ ಪ್ರಮುಖ ಕೆಲಸಗಳು. ಆಧುನೀಕರಣ, ಮೂಲಭೂತ ಸೌಕರ್ಯಗಳು, ಸಿಖ್ ಸಾಂಸ್ಕೃತಿಕ ಮತ್ತು ಕಲಾತ್ಮಕ ಪುನರುಜ್ಜೀವನ ಇವನ ಕಾಲದಲ್ಲಿ ನಡೆಯಿತು. ಭಾರತೀಯ ಪ್ರಸಿದ್ದ ಅರಸರಲ್ಲಿ ರಂಜಿತ್ ಸಿಂಗ್ಗೆ ವಿಶೇಷವಾದ ಸ್ಥಾನ.

06. ಪೃಥ್ವಿರಾಜ್ ಚೌಹಾನ್      


ಇಂದಿನ ರಾಜಸ್ಥಾನ, ಹರಿಯಾಣ, ದೆಹಲಿ ಪ್ರದೇಶಗಳೇ ಅಲ್ಲದೆ ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶಗಳ ಕೆಲವು ಭಾಗಗಳಲ್ಲಿ ತಮ್ಮ ಅಧಿಪತ್ಯವನ್ನು ಸಾದಿಸಿದ್ದ ದೊರೆ ಪೃಥ್ವಿರಾಜ್ ಚೌಹಾನ್. ಚೌಹಾನ್ ದೊರೆಗಳಲ್ಲಿ ಅತ್ಯಂತ ಶೌರ್ಯ ದೊರೆ ಎಂಬ ಹೆಸರು ಗಲಿಸಿದ್ದ ದೊರೆ. ರಾಜಕೀಯ ಕೇಂದ್ರ ದೆಹಲಿಯನ್ನಾಗಿ ಮಾಡಿಕೊಂಡು ಅದಿಪತ್ಯವನ್ನು ಸಾಧಿಸಿದ್ದನು.
ಪೃಥ್ವಿರಾಜ್ ಚೌಹಾನ್ ತನ್ನ ಆಡಳಿತದ ಆರಂಭಿಕ ದಿನಗಳಲ್ಲಿ ಚಂಡೇಲಾ ರಾಜ ಪರಮಾರ್ಡಿ ವಿರುದ್ದ ಜಯಿಸುವುದರ ಜೊತೆಗೆ ಅನೇಕ ನೆರೆಯ ಸಾಮ್ರಾಜ್ಯಗಳನ್ನು ವಶಪಡಿಸಿಕೊಂಡಿದ್ದನು. ಮೊಹಮದ್ ಘೊರಿ ಆಕ್ರಮಣನ್ನು ಆರಂಭದಲ್ಲಿ ತಡೆದಿದ್ದನು. ನಂತರ ತರೈನ್ ಯುದ್ದದಲ್ಲಿ ಅವನಿಗೆ ಶರಣಾದನು. ಪೃಥ್ವಿರಾಜ್ ತನ್ನ ಅಧಿಕಾರದ ಅವಧಿಯಲ್ಲಿ ಅನೇಕ ಏಳು ಬೀಳುಗಳನ್ನು ಕಂಡು ಯಶಸ್ವಿ ರಾಜನೆನಿಸಿಕೊಂಡಿದ್ದಾನೆ. ಭಾರತದ ಪ್ರಸಿದ್ದ ರಾಜರುಗಳಲ್ಲಿ ಒಬ್ಬನಾಗಿದ್ದಾನೆ.

05. ಕನಿಷ್ಕ   


ಉತ್ತರ ಭಾರತದಲ್ಲಿ ರಾಜ್ಯವಾಳಿದ ಕುಶಾಣ ವಂಶದ ಚಕ್ರವರ್ತಿಗಳಲ್ಲಿ ಅತ್ಯಂತ ಶ್ರೇಷ್ಠ ದೊರೆ ಕನಿಷ್ಕ. ವೀರ ಯೋಧನಾಗಿ, ಸಮ್ರಾಜ್ಯ ನಿರ್ಮಾಪಕನಾಗಿ, ಧರ್ಮ ಸಾಹಿತ್ಯ ಕಲೆಗಳ, ಮಹಾ ಪೋಷಕನಾಗಿ, ಭಾರತದ ಇತಿಹಾಸದಲ್ಲಿ ಇವನ ಹೆಸರು ಶೋಭಾಯಮಾನವಾಗಿದೆ. ಕ್ರಿ. 78ರಲ್ಲಿ ಆರಂಭವಾದ ಶಕ ಕಾಲಗಣನೆ ಕಾನಿಷ್ಕನಿಂದಲೇ ಪ್ರಾರಂಭವಾಯಿತೆಂದು ಹಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಮುಂದೆ ಇದು ಶಕಸಂವತ್ಸರವೆಂದು ಹೆಸರಾಗಿದ್ದನ್ನು ಕಾಣಬಹುದು.
ಕನಿಷ್ಕನು ಬೌದ್ಧನಾಗಿದ್ದನೆಂಬುದಕ್ಕೆ ಅನೇಕ ಶಾಸನಗಳು ಆಧಾರವನ್ನು ನೀಡುತ್ವೆ. ಈತನು ಕಲೆ ಮತ್ತು ವಾಸ್ತು ಶಿಲ್ಪಕ್ಕೆ ಅನೇಕ ಕೊಡುಗೆಯನ್ನು ನೀಡಿದ್ದಾನೆ ಜೊತೆಗೆ ಸಾಹಿತ್ಯ, ಸಂಗೀತಕ್ಕೆ ಹೆಚ್ಚಿನ ಮನ್ನಣೆ ನೀಡಿರುವುದು ಇವನ ಆಡಳಿತದಿಂದ ತಿಳಿದುಬರುತ್ತದೆ. ಇವನು ಚಲಾವಣೆಗೆ ತಂದ ನಾಣ್ಯಗಳು ಇದರ ಬಗ್ಗೆ ಸಾರಿ ಹೇಳುತ್ತವೆ. ಕನಿಷ್ಕನಿಗೆ ದೇವಪುತ್ರ ಎಂಬ ಬಿರುದನ್ನ ನೀಡಲಾಗಿತ್ತು.

04. ಶಿವಾಜಿ  


ಮರಾಠ ಸಾಮ್ರಾಜ್ಯದ ವೀರಯೋಧ ಅಖಂಡ ಭಾರತದ ಹಿಂದೂ ರಾಜರ ಪ್ರಸಿದ್ದ ದೊರೆ ಶಿವಾಜಿ. 1630ರಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿದ ಶಿವಾಜಿ. ಮುಸಲ್ಮಾನ್ ದೊರೆಗಳ ದಬ್ಬಾಳಿಕೆಯಿಂದ ಹಿಂದೂ ಜನಸಮುದಾಯವನ್ನು ರಕ್ಷಿಸಿದ ವೀರ ಯೋಧ. ಶಿಸ್ತಿನ ಮಿಲಿಟರಿ ಮತ್ತು ಸುಸಜ್ಜಿತ ಆಡಳಿತದಿಂದ ತನ್ನ ಸಮ್ರಾಜ್ಯವನ್ನು ವಿಸ್ತರಣೆ ಮಾಡಿದನು. ಪರ್ಷಿಯನ್ ಆಡಳಿತದ ಬದಲು ಮರಾಠಿ ಮತ್ತು ಸಂಸ್ಕೃತದಲ್ಲಿ ಆಡಳಿತವನ್ನು ನಡೆಸಿದ ದೊರೆ ಇವನು.
ಪ್ರತಾಪಗಡ ಯುದ್ದ, ಕೊಲ್ಹಾಪುರ ಕದನ, ಕಲ್ಹಾನ ಮತ್ತು ಪವನ್ಗಡ್ ಮುತ್ತಿಗೆ, ಮೊಘಲರೊಂದಿಗೆ ಕದನ, ಶೈಸ್ತಾಖಾನ್ ಮೇಲೆ ದಾಳಿ, ಪುರಂದರ್ ಒಪ್ಪಂದ ಮತ್ತು ಅಪ್ಜಲ್ ಖಾನ್ ನಡುವಿನ ಕಾಳಗ ಸೇರಿದಂತೆ ಹಲವು ಹೋರಾಟಗಳನ್ನು ಮಾಡಿದ್ದಾನೆ. ಇವನ ಆಡಳಿತವು ಉತ್ತಮವಾಗಿತ್ತು ಎಂಬುದಕ್ಕೆ ಒಂದು ಉದಾಹರಣೆಯಂತೆ ಶಿವಾಜಿ ಹಿಂದೂವಾಗಿದ್ದರು ಎಲ್ಲಾ ಧರ್ಮಿಯರನ್ನು ಸಮಾನವಾಗಿ ಕಾಣುತ್ತಿದ್ದನು. ಸಾಹಿತ್ಯ ಮತ್ತು ಸಂಗೀತಕ್ಕೂ ಹೆಚ್ಚಿನ ಹೊತ್ತನು ಕೊಟ್ಟಿದ್ದನು. ಭಾರತದ ಇತಿಹಾಸದಲ್ಲಿ ಮಿಂಚಿ ಮರೆಯಾದ ದೀರ ಯೋಧ.

03. ಅಶೋಕ  


ಸಾಮ್ರಾಟ್ ಅಶೋಕ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ. ಪ್ರಾಚೀನ ಭಾರತದಲ್ಲಿ ಅತ್ಯಂತ ದೊಡ್ಡ ರಾಜ್ಯವನ್ನಾಳಿದ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರು ಮೂಡಿ ಬರುತ್ತೆ. ಕಳಿಂಗ ಯುದ್ಧದ ಬಳಿಕ ಬೌದ್ಧ ಮತವನ್ನು ಪ್ರಚಾರಗೊಳಿಸುವುದರಲ್ಲಿ ತೊಡಗಿಕೊಂಡ ಸಾಮ್ರಾಟ್ ಅಶೋಕ. ವಿಶ್ವದೆಲ್ಲೆಡೆ ಬೌದ್ಧ ಮತ ಹರಡುವುದರಲ್ಲಿ ಪ್ರಮುಖ ಪಾತ್ರವಹಿಸಿದವನು.
ಭಾರತೀಯ ಇತಿಹಾಸದಲ್ಲಿ ಅಶೋಕನ ಸ್ಥಾನ ಬಹು ಎತ್ತರಕ್ಕೆ ನಿಲ್ಲುತ್ತೆ. ಮೌರ್ಯ ಸಾಮ್ರಾಜ್ಯದ ಸುಪ್ರಸಿದ್ದ ದೊರೆ ಅನೇಕ ದಂಡೆಯಾತ್ರೆಯ ಮೂಲಕ ಅಖಂಡ ಸಾಮ್ರಾಜ್ಯವನ್ನು ಸ್ಥಾಪಿಸಿದ. ಇವನು ಉಪಯೋಗಿಸಿದ ಚಕ್ರವನ್ನು ಅಶೋಕ ಚಕ್ರವಾಗಿ ಭಾರತದ ರಾಷ್ಟ್ರಧ್ವಜದಲ್ಲಿ ಬಳಸಲಾಗುತ್ತಿದೆ. ಅಶೋಕ ಭಾರತದ ಇತಿಹಾಸದಲ್ಲಿ ಸಾಮ್ರಾಟನಾಗಿ ನಿಲ್ಲುತ್ತಾನೆ.

02. ಅಕ್ಬರ್    


ಜಲಾಲುದ್ದೀನ್ ಮೊಹಮ್ಮದ್ ಅಕ್ಬರ್  ಹುಮಾಯೂನ್ ಮಗನಾಗಿ ಮೊಘಲ್ ಸಾಮ್ರಾಜ್ಯದ ದೊರೆಯಾಗಿ 1556 ರಿಂದ 1605 ರ ವರೆಗೆ ಆಳಿದನು. ಅಕ್ಬರ್ ಸಿಂಹಾಸನವೇರಿದಾಗ ಕೇವಲ 13 ವರ್ಷ ವಯಸ್ಸು ಮೊಘಲ್ ಸಾಮ್ರಾಜ್ಯದ ಸರ್ವಶ್ರೇಷ್ಠ ದೊರೆಯಾಗಿ ಪರಿಗಣಿತನಾಗಿದ್ದಾನೆ. ಅಕ್ಬರನು 1556ರಲ್ಲಿ ಸಿಕಂದರ್ ಷಾನೊಂದಿಗೆ ಯುದ್ಧದ ಮಧ್ಯದಲ್ಲಿ ಸಿಂಹಾಸನವನ್ನೇರಿ ಷಹನ್ ಷಾ ಎಂಬ ಬಿರುದನ್ನು ಪಡೆದನು.
ಅಕ್ಬರನು ಸಾಮ್ರಾಜ್ಯ ವಿಸ್ತರಣೆಯ ದೃಷ್ಠಿಯಿಂದ ಅನೇಕ ಯುದ್ದಗಳನ್ನು ಮಾಡಿದನು ಅದರಲ್ಲಿ ಹಿಂದೂ ದೊರೆ ಹೇಮುವನ್ನು ಕೊಂದು ರಾಜ್ಯ ವಿಸ್ತರಣೆ ಮಾಡಿದುದು ವಿಶೇಷ. ಇನ್ನೂ ಅಕ್ಬರ್ ಧರ್ಮ ಸಹಿಷ್ಣುವಾಗಿ ಹಿಂದೂ, ಕ್ರೈಸ್ತ ಮತ್ತು ಮುಸ್ಲಿಂ ದೊರೆಗಳನ್ನು ತನ್ನ ಆಡಳಿತದ ಅಧಿಕಾರಿಗಳಾಗಿ ನೇಮಿಸಿಕೊಂಡು ಜನಪ್ರಿಯವಾಗಿದ್ದನು. ಈತನು ಧೈರ್ಯಶಾಲಿ ಯೋಧನು ಮತ್ತು ನೀತಿ ಪರಿಪಾಲಕನು ಆಗಿದ್ದಾನೆ. ಜೊತೆಗೆ ಇತಿಹಾಸಕಾರರ ಪ್ರಕಾರ ಹೆಣ್ಣುಗಳ ಲಾಲಸೆಯಿತ್ತು ಮತ್ತು ಕುಡಿತದ ಚಟವೂ ಇತ್ತು ಎನ್ನಲಾಗುತ್ತೆ.

01. ಚಂದ್ರಗುಪ್ತ ಮೌರ್ಯ        


ಭಾರತೀಯ ಸಂಸ್ಕೃತಿಯ, ಸಾಮ್ರಾಜ್ಯದ ಹೆಮ್ಮೆಯ ಪ್ರತೀಕವಾಗಿ, ರಾಜರುಗಳಿಗೆ ರಾಜನಾಗಿ ಬೆಳೆದು ಅಖಂಡ ಭರತ ಸಾಮ್ರಾಜ್ಯವನ್ನು ಕಟ್ಟಿದ ಶ್ರೇಯ ಚಂದ್ರಗುಪ್ತ ಮೌರ್ಯನಿಗೆ ಸಲ್ಲುತ್ತೆ. ಈತನ ಗುರುವಾಗಿ ಮಾರ್ಗದರ್ಶಕನಾಗಿ ಒಳಿತು ಕೆಡುಕುಗಳ ಆಧಾರವಾಗಿ ಚಾಣುಕ್ಯ ನಿಲ್ಲುತ್ತಾನೆ. ಕ್ರಿ.ಪೂ. 340ರಲ್ಲಿ ಹುಟ್ಟಿ ಮೌರ್ಯ ಸಾಮ್ರಾಜ್ಯದ ಸ್ಥಾಪಕನಾಗಿ ಬೆಳೆದ ದೊರೆ ಚಂದ್ರಗುಪ್ತ ಮೌರ್ಯ.
ಕೇವಲ 20 ವರ್ಷದವನಿದ್ದಾಗಲೇ ಸಣ್ಣ-ಪುಟ್ಟ ರಾಜ್ಯಗಳನ್ನು ಜೊತೆಗೆ, ನಂದ ಸಾಮ್ರಾಜ್ಯವನ್ನು ವಶಪಡಿಸಿಕೊಂಡ ದೀರ ಸೈನಿಕ. ಇವನ ಆಡಳಿತವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹವುಗಳು.  ಅವಮಾನಕ್ಕೆ ಒಳಗಾಗಿ ಸಾಮ್ರಾಜ್ಯವನ್ನು ಕಟ್ಟಿ. ಅನೇಕ ಯುದ್ದಗಳನ್ನು ಗೆದ್ದು ಸಾರ್ವಭೌಮನಾಗಿ ಮೆರೆದ ಚಂದ್ರಗುಪ್ತ ಮೌರ್ಯನು ಕೊನೆಗೆ ಜೈನ ಧರ್ಮಕ್ಕೆ ಮತಾಂತರಗೊಂಡು ಕರ್ನಾಟಕದ ಶ್ರವಣಬೆಳಗೊಳಕ್ಕೆ ಬಂದು ಕೊನೆಯ ದಿನಗಳನ್ನು ಕಳೆದನ್ನು ಎನ್ನಲಾಗುತ್ತದೆ. ಭಾರತೀಯ ರಾಜರುಗಳಲ್ಲಿ ಮೊದಲಿಗನಾಗಿ ನಿಲ್ಲುತ್ತಾನೆ ಚಂದ್ರಗುಪ್ತ ಮೌರ್ಯ.
 ಮಂಜುನಾಥ್ ಜೈ

manjunathahr1991@gmail.com


ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ...

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಕರ್ನಾಟಕದ 10 ಸುಂದರ ಬೆಟ್ಟಗಳು - 25